ಅಭಿನವ ಮಂತ್ರಾಲಯ | Abhinava Mantralaya

ಅರವತ್ತು ವರುಷಗಳ ಹಿಂದಿನ ಮಾತು. 1935ರ ಆಜು ಬಾಜು ಬೆಂಗಳೂರಿನಲ್ಲಿ ನೆಲೆಸಿ ಧಾರ್ಮಿಕ ಕಾರ್ಯಕ್ರಮಗಳಲ್ಲೇ ನಿಸ್ವಾರ್ಥ ಮನೋಭಾವದಿಂದ ತಮ್ಮನ್ನು ತೊಡಗಿಸಿಕೊಂಡಿದ್ದ ಒಬ್ಬ ಕ್ರಿಯಾಶೀಲ ನೇರನುಡಿಯ ಬ್ರಾಹ್ಮಣ – ಚಿಕ್ಕಪೇಟೆ ಹಾಗೂ ಸೀತಾಪತಿ ಅಗ್ರಹಾರದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಜೀರ್ಣೋದ್ಧಾರದಲ್ಲಿ ತಮ್ಮನ್ನು ತೊಡಗಿಸಿದ್ದ ಆತ – ಅವರೇ ಶ್ರೀ ನಂದಗುಡಿ ಹನುಮಂತರಾಯರು. ತಂದೆ ಕೀರ್ತಿಶೇಷ ಗೋವಿಂದಪ್ಪ ನವರು ಮತ್ತು ತಾಯಿ ಸೌ ।। ಅಮ್ಮಣ್ಣಮ್ಮನವರು. ಹುಟ್ಟಿದ್ದು ಬೆಂಗಳೂರು ಜಿಲ್ಲೆ ಹೊಸಕೋಟೆ ತಾಲ್ಲೂಕು ನಂದಗುಡಿ ಗ್ರಾಮ.

ಮುಂದೆ ಹನುಮಂತರಾಯರ ಕಾರ್ಯಕ್ಷೇತ್ರ ಮೈಸೂರಿನಲ್ಲಿ. ಆಗ ಮೈಸೂರು ಈಗಿನಷ್ಟು ಬೆಳದಿರಲಿಲ್ಲ . ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಪ್ರತಿಷ್ಠೆ ಮಾಡಲು ನಿರ್ಧಾರ. ಏಕಾಂಗಿ ಸಾಹಸ. ಖ್ಯಾತ ಸಂಸ್ಕೃತ ಪಂಡಿತ ದಿ ।। ಎಲಮೇಲಿ ವಾಸುದೇವಾಚಾರ್ಯರಲ್ಲಿ ತಾತ್ಪರ್ಯ ನಿರ್ಣಯ ಪ್ರಶ್ನೆ. ಶ್ರೀಮದಾಚಾರ್ಯರು ಸೂಚಿಸಿದ್ದು “ನರಕಾಸುರನ ಸಂಹಾರದ ನಂತರ ಶ್ರೀಕೃಷ್ಣ ರುಕ್ಮಿಣಿ ಸತ್ಯಭಾಮ ಸಮೇತನಾಗಿ ಅತುಲ ಸಂಪತ್ತಿನಿಂದ ಕೂಡಿ ದ್ವಾರಕೆಗೆ ಬಂದ ಘಟ್ಟ ” – ಇದೇ ರಾಯರಿಗೆ ದೊರೆತ ಪ್ರೇರಣೆ. ಹರಿಗುರುಗಳಲ್ಲಿ ವಿಶ್ವಾಸದಿಂದ ಕಾರ್ಯ ಪ್ರಾರಂಭಿಸೇಬಿಟ್ಟರು.

ರಾಯರ ಸೇವೆಗೆ ಧಾರೆಯೆರೆದು ಮಂತ್ರಾಲಯದಿಂದ ಕಾಲ್ನಡಿಗೆ ನಡೆಸಿ ಮೃತ್ತಿಕೆ ಹೊತ್ತು ತಂದವರೇ ಶ್ರೀ ಮಂಕಣಾಲದ ಗುರುರಾಯರು. ಸಾರ್ವಜನಿಕರ ಸಹಕಾರದಿಂದ ಸರ್ವಧಾರಿ ಸಂವತ್ಸರದ ಜ್ಯೇಷ್ಠಶುದ್ಧ ಪಂಚಮಿ ಅಂದರೆ 1947ರಲ್ಲಿ ಖ್ಯಾತ ಯಾಜ್ಞಿಕರೂ ಘನ ವಿದ್ವಾಂಸರೂ ಆದ ಶ್ರೀ ಚತುರ್ವೇದಿ ರಾಮಚಂದ್ರಾಚಾರ್ಯರ ನೇತೃತ್ವದಲ್ಲಿ ಶ್ರೀರಾಘವೇಂದ್ರ ಸ್ವಾಮಿಗಳವರ ಪ್ರತಿಷ್ಠಾಪನೆ ನೆರವೇರಿತು. ಮೈಸೂರಿನ ಖ್ಯಾತ ಕಂಟ್ರಾಕ್ಟರ್ ಬೋರಯ್ಯ ಬಸವಯ್ಯ ಅಂಡ್ ಸನ್ಸ್ ರವರು ಗರ್ಭಗುಡಿ ಕಟ್ಟಿಸಿಕೊಟ್ಟರು. ದೊರೆತ ಜಾಗ – ದೊಡ್ಡ ಕೆರೆಯ ಅಂಗಳ, ನಿಲ್ಲಲು ನೆಲೆಯಿಲ್ಲ. ರಾತ್ರಿಯ ಕಾರ್ಗತ್ತಲು. ರಾತ್ರಿ ವೇಳೆ ಸುಳಿದಾಡಲು ಜನಗಳಿಗೇ ಭಯ. ತೆಂಗಿನ ಚಪ್ಪರವೇ ಆಸರೆ. ಇಂತಹ ವಿಷಮ ಸನ್ನಿವೇಶದಲ್ಲಿ ಹನುಮಂತರಾಯರ ಸೇವಾ ಕೈಂಕರ್ಯಕ್ಕೆ ನೇರವಾಗಿ ನಿಂತವರು ಧರ್ಮಪತ್ನಿ ಸೌ ।। ಕಮಲಮ್ಮನವರು. ಆಸೆ ಅಸೂಯೆಗಳಿಂದ ಪ್ರೇರಿತರಾದವರಿಂದ ನಿರಂತರ ಅಡೆತಡೆಗಳು. ಯಾವುದಕ್ಕೂ ಸೊಪ್ಪುಹಾಕದೆ ಧೈರ್ಯದಿಂದ ಎದೆ ಒಡ್ಡಿ ನಿಂತರು ರಾಯರು.

ಶ್ರೀರಾಯರ ಪ್ರತಿಷ್ಠೆಯ ಹತ್ತು ವರ್ಷಗಳ ನಂತರ ಇದೇ ಆವರಣದಲ್ಲಿ ಶ್ರೀ ಸತ್ಯನಾರಾಯಣ, ಶ್ರೀ ಗಣಪತಿ, ಶ್ರೀ ನವಗ್ರಹಗಳ ಪ್ರತಿಷ್ಠಾಪನೆ, ಶಮಿ-ಧಾತ್ರಿ-ಅಶ್ವತ್ಥ-ಕಲ್ಪವೃಕ್ಷಗಳ ಸಾನ್ನಿಧ್ಯ.

1962ರಲ್ಲಿ ಮೈಸೂರಿಗೆ ಶ್ರೀ ಸೋಸಲೆ ವ್ಯಾಸರಾಜ ಸಂಸ್ಥಾನಾಧೀಶರಾದ ಶ್ರೀವಿದ್ಯಾಪ್ರಸನ್ನತೀರ್ಥರ ಮೊದಲ ಆಗಮನ. ಅದ್ದೂರಿ ಸ್ವಾಗತ. ವೈಭವ ಮೆರವಣಿಗೆ ಇವೆಲ್ಲದರ ಹೆಗ್ಗಳಿಕೆ ಶ್ರೀಮಠಕ್ಕೆ ಸಲ್ಲತಕ್ಕದ್ದು.

83 ವರ್ಷಗಳ ಸಾರ್ಥಕ ಜೀವನ ನಡೆಸಿದ ಶ್ರೀನಂದಗುಡಿ ಹನುಮಂತರಾಯರು 1967ರಲ್ಲಿ ವೈಕುಂಠವಾಸಿಗಳಾದರು. ಮುಂದಿನ ಜವಾಬ್ದಾರಿಯೆಲ್ಲಾ ಹನುಮಂತರಾಯರ ಅಳಿಯಂದಿರಾದ ಶ್ರೀ ಶ್ರೀನಿವಾಸರಾಯರ ಪಾಲಿಗೆ ಬಂದಿತು. ಮಾವನವರು ತೋರಿದ ಹಾದಿಯಲ್ಲೇ ನಡೆಸಲು ತೆಗೆದುಕೊಂಡ ದಿಟ್ಟ ಹೆಜ್ಜೆ.

ಸಮಾಜದ ಮಧ್ಯಮವರ್ಗದ ಮಂದಿಗೆ ಕಲ್ಯಾಣಮಂಟಪದ ಕೊರತೆ ಆಗ ಕಾಡುತ್ತಿತ್ತು. ಮಹಾಜನರ ಸಹಕಾರದಿಂದ 1971ರಲ್ಲಿ “ಶ್ರೀರಾಘವೇಂದ್ರ ಸ್ವಾಮಿಗಳ ಕಲ್ಯಾಣಮಂಟಪ “ನಿರ್ಮಾಣವಾಯ್ತು. ಇದನ್ನು ನಿರ್ಮಿಸಿಕೊಟ್ಟವರು ಕಂಟ್ರಾಕ್ಟರ್ ಶ್ರೀ ವಾಸುದೇವರಾಯರು. 20,000ರೂಗಳನ್ನು ದಾನಮಾಡಿ ಈ ಕಲ್ಯಾಣಮಂಟಪದ ನಿರ್ಮಾಣಕ್ಕೆ ಕಾರಣಕರ್ತರು ಅರಮನೆ ಮೋಖ್ತೇಸರು ಶ್ರೀ ಎಸ್. ನಾರಾಯಣರಾಯರು ಹಾಗೂ ಧರ್ಮಪತ್ನಿ ಸೌ ।। ಸೀತಮ್ಮನವರು.

ಅಪರೂಪಕ್ಕೊಂದು ಮಂದಿರ, ತತ್ವಜ್ಞಾನ ಮಂದಿರ

ಕರ್ನಾಟಕದಾದ್ಯಂತ ಅನೇಕ ರಾಘವೇಂದ್ರ ಮಠಗಳಿವೆ. ಆದರೆ ಕೇವಲ ತತ್ವಜ್ಞಾನಕ್ಕೋಸ್ಕರವಾಗಿಯೇ ಮೀಸಲಾದ ಮಂದಿರ ಹೊಂದಿರುವ ಹಿರಿಮೆ ಕೃಷ್ಣಮೂರ್ತಿಪುರಂ ಶ್ರೀ ರಾಘವೇಂದ್ರ ಸ್ವಾಮಿಗಳ ಮಠಕ್ಕೆ ಸೇರಬೇಕು. 500 ಜನ ಕುಳಿತುಕೊಳ್ಳಬಹುದಾದ ವಿಶಾಲ ಮಂದಿರ ನಿರ್ಮಾಣ 1985ರಲ್ಲಿ ಆಯಿತು. ಶ್ರೀಮದಾಚಾರ್ಯರ ಅಮೃತಶಿಲೆಯ ಪ್ರತಿಷ್ಠಾಪನೆಯನ್ನು ಶ್ರೀ ‘ಪಲಿಮಾರು ಮಠಾಧೀಶರಾದ ಶ್ರೀವಿದ್ಯಾಮಾನ್ಯ ತೀರ್ಥ ಶ್ರೀಪಾದಂಗಳವರು ನಡೆಸಿಕೊಟ್ಟಿದ್ದಾರೆ. 1990ರಲ್ಲಿ ಇದೇ ಮಂದಿರದಲ್ಲಿ ಶ್ರೀಮದುತ್ತರಾದಿ ಮಠಾಧೀಶರಾದ ಶ್ರೀ ಸತ್ಯಪ್ರಮೋದ ತೀರ್ಥ ಶ್ರೀಪಾದಂಗಳವರು ಶ್ರೀವೇದವ್ಯಾಸರ ಪ್ರತಿಷ್ಠಾಪನೆಗೈದರು. ವರುಷದ 365 ದಿನಗಳಲ್ಲೂ ಸಂಜೆವೇಳೆ ಒಂದು ಗಂಟೆ ಕಾಲ ಧಾರ್ಮಿಕ ಪ್ರವಚನ ಕೈಗೊಳ್ಳುವ ಆಶಯ ವ್ಯವಸ್ಥಾಪಕರದಾಗಿತ್ತು. ಅಂದಿನಿಂದ ಇಂದಿಗೂ ಇದು ಅವ್ಯಾಹತವಾಗಿ ನಡೆದು ಬಂದಿದೆ. ಈ ಸಂದರ್ಭದಲ್ಲಿ ಸ್ಥಳೀಯ ವಿದ್ವಾಂಸರ ಸಹಕಾರ ಶ್ಲಾಘನೀಯ. ನಾಡಿನಾದ್ಯಂತದ ಪ್ರಖ್ಯಾತ ವಿದ್ವಾಂಸರು ಇಲ್ಲಿಗೆ ಆಗಮಿಸಿ ಪ್ರವಚನ ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದಾರೆ.

ಇದುವರೆಗೆ ಹೇಳಿದ್ದು ಶ್ರೀಮಠದ ನಡೆದು ಬಂದ 50 ವರ್ಷಗಳ ಸ್ಥೂಲಪರಿಚಯ. ಈ ಅವಧಿಯಲ್ಲಿ ಮಠ ಎದುರಿಸಿದ ವಿಪತ್ತುಗಳು ಅಷ್ಟಿಷ್ಟಲ್ಲ. ಆದರೆ ಶ್ರೀ ಗುರುಸಾರ್ವಭೌಮರ ಅನುಗ್ರಹವೇ ಇಂದಿನ “ಸುವರ್ಣ ಮಹೋತ್ಸವ” ನಡೆಯುವುದಕ್ಕೆ ಸಾಕ್ಷಿಯಾಗಿದೆ. ಸ್ವರ್ಣಮಹೋತ್ಸವದ ಸವಿನೆನಪಿಗಾಗಿ ಭಕ್ತಾದಿಗಳು ಪ್ರದಕ್ಷಿಣೆ ಮಾಡುವ ಪ್ರಾಂಗಣಕ್ಕೆ ತಾರಸಿಹಾಕಲಾಗಿದೆ.

ಇನ್ನು ಮುಂದೆ ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವುದು ಶ್ರೀ ರಾಘವೇಂದ್ರ ಸ್ವಾಮಿಗಳ ಬೃಂದಾವನ ಟ್ರಸ್ಟ್ ನ ಉದ್ದೇಶವಾಗಿರುತ್ತದೆ. ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಉಚಿತ ಆರೋಗ್ಯ ತಪಾಸಣೆ ಮಾಡುವುದು ಇತ್ಯಾದಿ. ಇವೆಲ್ಲಕ್ಕೂ ಸಾರ್ವಜನಿಕರ ಸಹಕಾರ ಅತ್ಯಗತ್ಯ .